ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಅ.24ರಂದು ``ಯಕ್ಷಪೂರ್ಣಿಮಾ`` ಸಮಾರೋಪ , ಇಬ್ಬರು ಸಾಧಕರಿಗೆ ದೇಶಮಂಗಲ ಪ್ರಶಸ್ತಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಒಕ್ಟೋಬರ್ 23 , 2015
ಒಕ್ಟೋಬರ್ 23, 2015

ಅ.24ರಂದು ``ಯಕ್ಷಪೂರ್ಣಿಮಾ`` ಸಮಾರೋಪ , ಇಬ್ಬರು ಸಾಧಕರಿಗೆ ದೇಶಮಂಗಲ ಪ್ರಶಸ್ತಿ

ಕುಂಬಳೆ : ಗಡಿನಾಡು ಕಾಸರಗೋಡಿನ ಸಾಂಸ್ಕೃತಿಕ ಸಾರಥಿ, ಸಂಶೋಧಕ, ಅರ್ಥಧಾರಿ, ಸಂಶೋಧಕ ಹೀಗೆ ಬಹುನೆಲೆಗಳ ಬಹುಮುಖೀ ಸಾಧನೆಯಿಂದ ಅಮರರಾದ ಕೀರ್ತಿಶೇಷ ದೇಶಮಂಗಲ ಕೃಷ್ಣ ಕಾರಂತರ ಜನ್ಮ ಶತಮಾನೋತ್ಸವದ ಅಂಗವಾಗಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ವತಿಯಿಂದ ನಡೆದ ಯಕ್ಷಪೂರ್ಣಿಮ ತಾಳಮದ್ದಳೆ ಸರಣಿ ಅಭಿಯಾನದ ಸಮಾರೋಪ ಸಮಾರಂಭ ಮತ್ತು ಸನ್ಮಾನ ಸಹಿತ ಪ್ರಶಸ್ತಿ ಪ್ರಧಾನ ಹಾಗೂ ದೊಂದಿ ಬೆಳಕಿನ ಬಯಲಾಟ ಅ.24ರಂದು ಮಧೂರು ಬಳಿಯ ಪರಕ್ಕಿಲ ಶ್ರೀ ಮಹಾದೇವ ಶಾಸ್ತಾರ ವಿನಾಯಕ ದೇವಾಲಯದಲ್ಲಿ ಜರಗಲಿದೆ. ಬೆಳಿಗ್ಗಿನಿಂದ ನಡೆಯುವ ಕಾರ್ಯಕ್ರಮಗಳ ಸರದಿಯಲ್ಲಿ ಸಂಜೆ ಸಮಾರೋಪ ಸಮಾರಂಭದಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆಯಿತ್ತ ಇಬ್ಬರು ಸಾಧಕರಿಗೆ ಪ್ರಶಸ್ತಿ ಮತ್ತು ಇಬ್ಬರಿಗೆ ಸನ್ಮಾನ ನಡೆಯಲಿದೆ. ಅವರ ಕುರಿತಾದ ಸಂಕ್ಷಿಪ್ತ ಪರಿಚಯ ಮಾಹಿತಿ ಇಲ್ಲಿದೆ.

ಬ್ರಹ್ಮಶ್ರೀ ಉಳಿಯ ವಿಷ್ಣು ಅಸ್ರರಿಗೆ ಯಕ್ಷಪೂರ್ಣಿಮಾ ಪ್ರಶಸ್ತಿ



ದೇಶಮಂಗಲ ಕೃಷ್ಣ ಕಾರಂತರ ಸ್ಮ್ರುತಿಯಂಗವಾಗಿ ಸಿರಿಬಾಗಿಲು ಪ್ರತಿಷ್ಠಾನದ ಮೂಲಕ ವರ್ಷವಿಡೀ ನಡೆದ ಸರಣಿ ತಾಳಮದ್ದಳೆಯೇ ಯಕ್ಷಪೂರ್ಣಿಮಾ ಅಭಿಯಾನ. ಈ ಅಭಿಯಾನದ ಹೆಸರಲ್ಲೊಂದು ಪ್ರಶಸ್ತಿ ರೂಪಿಸಿ ಅದನ್ನು ತಂತ್ರಿವರ್ಯ ಉಳಿಯ ವಿಷ್ಣು ಆಸ್ರ ಅವರಿಗೆ ನೀಡಲು ತೀರ್ಮಾನಿಸಲಾಗಿದೆ. ತಂತ್ರಿಗಳ ಉಳಿಯ ‘ಸುಧಾಮಂದಿರ’ ಎಂಬ ನಿವಾಸ ಆಟ-ಕೂಟಗಳ ಆಶ್ರಯದಾಣ. ಕಾಸರಗೋಡಿನ ಯಕ್ಷಗಾನ ಕಲಾವಿದರ ಪಾಲಿಗೆ ಇದೊಂದು ಗುರುಕುಲವಿದ್ದಂತೆ. ಇಲ್ಲಿನ ಶ್ರೀಧನ್ವಂತರೀ ಯಕ್ಷಗಾನ ಕಲಾಸಂಘ ಆಟ-ಕೂಟಗಳಿಗೆ ಇತ್ತ ಕೊಡುಗೆ ಐತಿಹಾಸಿಕ. ಉಳಿಯ ವಿಷ್ಣು ಅಸ್ರರು ಅದರ ಚಾಲಕ ಶಕ್ತಿ. ಸೀಮೆಯ ಹಲವು ಕ್ಷೇತ್ರಗಳ ತಂತ್ರಸ್ಥಾನದ ಜೊತೆಯಲ್ಲೇ ಯಕ್ಷಗಾನವನ್ನೂ ಆರಾಧಿಸುವ ಶ್ರೀಯುತರು ಸಾತ್ವಿಕ ಅರ್ಥಧಾರಿ. ಸಿರಿಬಾಗಿಲು ಪ್ರತಿಷ್ಠಾನದ ಯಕ್ಷಪೂರ್ಣಿಮ ಅಭಿಯಾನದಲ್ಲೂ ಪಾಲ್ಗೊಂಡು ಹಲವು ಪಾತ್ರಗಳಿಗೆ ಜೀವ ತುಂಬಿದವರು. ಅರ್ಥಗಾರಿಕೆ, ಪ್ರವಚನ, ಧಾರ್ಮಿಕ ಭಾಷಣ, ವೈದಿಕಕ್ಷೇತ್ರ ಹೀಗೆ ಬಹುಮುಖೀ ಆಯಾಮದಲ್ಲಿ ಪ್ರತಿಭಾ ಮಂಡಲವನ್ನು ವಿಸ್ತರಿಸಿಕೊಂಡಿರುವ ಉಳಿಯ ವಿಷ್ಣು ಆಸ್ರರು ಅಪ್ಪಟ ಕಲಾಪ್ರೇಮಿ, ಕಲಾಪೋಷಕ. ಅವರ ಕಳಕಳಿಯ ಕಾಯಕಕ್ಕೊಂದು ಮನ್ನಣೆ ಎಂಬಂತೆ ‘ಯಕ್ಷಪೂರ್ಣಿಮ’ ಪ್ರಶಸ್ತಿಗೆ ಅವರನ್ನು ಆರಿಸಲಾಗಿದೆ.

ಪೆರುವಡಿ ನಾರಾಯಣ ಭಟ್ಟರಿಗೆ ದೇಶಮಂಗಲ ಕಾರಂತ ಪ್ರಶಸ್ತಿ

ತೆಂಕಣ ಯಕ್ಷಗಾನದಲ್ಲಿ ಪೆರುವೋಡಿ ಎಂದರೆ ಒಂದು ಇತಿಹಾಸ. ಪ್ರಥಮ ತುಳು ಯಕ್ಷಗಾನ ಪ್ರಸಂಗ ಬರೆದ ಬಾಯಾರು ಸಂಕಯ್ಯ ಭಾಗವತರ ಪೀಳಿಗೆಯವರು ಪರುವೋಡಿ ನಾರಾಯಣ ಭಟ್ಟರು. ಗುರು ಕುರಿಯ ವಿಠಲ ಶಾಸ್ತ್ರಿಗಳ ಉತ್ತಾರಾಧಿಕಾರಿ. ಮೇಳವನ್ನು ನಡೆಸಿದ ಕುಟುಂಬ ಹಿನ್ನೆಲೆ ಉಳ್ಳವರು. ನಾಟ್ಯದ ಚೆಲುವಿಗೆ ಅಭಿನಯ ಭಾವದ ಎರಕವನ್ನು ಎರೆದು ಪೋಣಿಸಿದ ಅನನ್ಯ ಕಲಾವಿದರಿವರು. ಕುರಿಯ ವಿಠಲ ಶಾಸ್ತ್ರಿಗಳ ಸಾರಥ್ಯದಲ್ಲಿ ಶ್ರೀ ಧರ್ಮಸ್ಥಳ ಮೇಳವಿದ್ದಾಗ ‘ಕ್ಷೇತ್ರ ಮಹಾತ್ಮೆ’ ಪ್ರಸಂಗದಲ್ಲಿ ಅಮ್ಮುದೇವಿಯಾಗಿ ಮೆರೆದು ಪಾತ್ರಕ್ಕೊಂದು ಛಾಪೊತ್ತಿದವರು ಇವರು. ಭರತ, ಪಾರಿಜಾತದ ಕೃಷ್ಣ, ಚೂಡಾಮಣಿಯ ಹನೂಮಂತ ಮೊದಲಾದ ಪಾತ್ರಗಳನ್ನು ಮನೋಜ್ಞವಾಗಿ ಅಭಿವ್ಯಕ್ತಿಗೊಳಿಸಿ ಚಿರಸ್ಥಾಯಿಯನ್ನಾಗಿಸಿದ ಶ್ರೇಯಸ್ಸು ಇವರದ್ದು. ಉಡುಪಿ ಯಕ್ಷಗಾನ ಕಲಾರಂಗದ ಪ್ರಶಸ್ತಿ, ದೇರಾಜೆ ಪ್ರಶಸ್ತಿ ಸಹಿತ ನೂರಾರು ಪ್ರಶಸ್ತಿ ಸಂದ ಇವರು ದೇಶಮಂಗಲ ಕೃಷ್ಣ ಕಾರಂತರ ಆಪ್ತರಲ್ಲೊಬ್ಬರಾಗಿದ್ದರು. ಈ ಹಿನ್ನೆಲೆಯಲ್ಲಿ ನಟಶ್ರೇಷ್ಟನಿಗೆ ದೇಶಮಂಗಲ ಕಾರಂತರ ಜನ್ಮಶತಾಬ್ದಿ ಪ್ರಶಸ್ತಿ ಸಲ್ಲುತ್ತಿದೆ.

ಕೋಂಗೋಟು ರಾಧಾಕೃಷ್ಣ ಭಟ್ ಅವರಿಗೆ ಸನ್ಮಾನ

ಅಂತರ್ಜಾಲ ಮಾಧ್ಯಮದಲ್ಲಿ ಯಕ್ಷಗಾನ ಕ್ರಾಂತಿಯನ್ನೆಬ್ಬಿಸಿದವರು ಕೋಂಗೋಟು ರಾಧಾಕೃಷ್ಣ ಭಟ್ಟರು. ಇವರು ಸ್ವತಃ ಕಲಾವಿದರಲ್ಲ, ಪೂರ್ವಿಕರ ಕಲಾಹಿನ್ನೆಲೆಯುಳ್ಳ ಕಲಾಹೃದಯಿ. ಕಾಞ್ಞಂಗಾಡಿನಲ್ಲಿ ನೆಲೆಸಿದ್ದರೂ ಅಪ್ಪಟ ಯಕ್ಷಗಾನ ಪ್ರೇಮಿ. ಅಂತರ್ಜಾಲದಲ್ಲಿ ತಾನು ಪ್ರಾರಂಭಿಸಿದ ಮೊದಲ ಯುಟ್ಯೂಬ್ ಚ್ಯಾನೆಲ್ “ಆರ್ ಕೆ ಬಿ” ವರ್ಷ ಪೂರೈಸುವ ಮುನ್ನವೇ 18ಲಕ್ಷ ವೀಕ್ಷಕರನ್ನು ಹೊಂದಿ ದಾಖಲೆ ನಿರ್ಮಿಸಿತ್ತು. ಕಾಕತಾಳಿಯವಾಗಿ ಈ ಚ್ಯಾನೆಲ್ ಡಿಲೀಟ್ ಗೊಂಡ ಬಳಿಕ ಪುನರಾರಂಭಿಸಿದ “ಕೋಂಗೋಟ್ ಯುವಿಆರ್ ಕೆ” ಚ್ಯಾನೆಲ್ ಕೂಡಾ ಯಕ್ಷಗಾನದ ಅತ್ಯಧಿಕ ವೀಕ್ಷಕರನ್ನು ಹೊಂದಿದ ಅತ್ಯುತ್ಕøಷ್ಟ ಮಟ್ಟದ ಜನಪ್ರಿಯ ಯುಟ್ಯೂಬ್ ಚ್ಯಾನೆಲ್ ಎಂದೇ ಜಗದ್ವಿಖ್ಯಾತವಾಗಿದೆ. ಜಗತ್ತಿನ ಮೂಲೆಮೂಲೆಗಳಿಂದ 50ಲಕ್ಷದಷ್ಟು ವೀಕ್ಷಕರನ್ನು ಹೊಂದಿದ ಹಿರಿಮೆ ಇದರದ್ದು. ಯಕ್ಷಗಾನವನ್ನು ಯೂಟ್ಯೂಬ್ ಮೂಲಕ ಜಗತ್ತಿಗೆ ಪರಿಚಯಿಸುವ, ಕಲೆಗೆ-ಕಲಾವಿದರಿಗೆ ಪ್ರಚಾರ ನೀಡುವ ಇವರ ಸದ್ದಿಲ್ಲದ ಕಾಯಕ ಅನನ್ಯ. ಅಂತರ್ಜಾಲ ಮಾಧ್ಯಮದ ಮೂಲಕ ಯಕ್ಷಗಾನಕ್ಕೆ ನೀಡಿದ ಅವರ ಕೊಡುಗೆ ಮನ್ನಿಸಿ ಅವರನ್ನು ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ.

ಗೋಪಾಲಕೃಷ್ಣ ನಾವಡ ಮಧೂರು ಅವರಿಗೆ ಸನ್ಮಾನ

ಎಳವೆಯಲ್ಲಿ ವೇಷಗಾರಿಕೆ ಮಾಡುತ್ತಿದ್ದ ಮಧೂರು ಗೋಪಾಲಕೃಷ್ಣ ನಾವಡರು ಹಿಮ್ಮೇಳ ಕಲಾವಿದರಾಗಿ ರೂಪುಗೊಂಡದ್ದು ಆಕಸ್ಮಿಕ. ಬಯಲಾಟಗಳಲ್ಲಿ ವೇಷ ಮಾಡಿ ಬಳಿಕ ಚಕ್ರತಾಳ ಬಾರಿಸುತ್ತಿದ್ದಾಗ ಹಿಮ್ಮೇಳದ ಆಕರ್ಷಣೆ. ಸುಳ್ಯ ಕಾಯರ್ತೋಡಿನಲ್ಲಿ ಕೋಡ್ಲ ಗಣಪತಿ ಭಟ್ಟರ ಕಲಿಕಾ ಕೇಂದ್ರದಲ್ಲಿ ಹಿಮ್ಮೇಳ ಕಲಿಕೆ. ಪದ್ಯಾಣ ಶಂಕರನಾರಾಯಣ ಭಟ್ಟರ ಶಿಷ್ಯ. ಹಿರಿಯ ಭಾಗವತ, ಸಂಬಂಧದಲ್ಲಿ ಮಾವ ಪುತ್ತಿಗೆ ರಘುರಾಮ ಹೊಳ್ಳರು ಕರ್ನೂರು ಕೊರಗಪ್ಪ ರೈಗಳ ನೇತೃತ್ವದ ಕದ್ರಿ ಮೇಳಕ್ಕೆ ಕರೆಸಿ ಅವಕಾಶವಿತ್ತು ತಿದ್ದಿ ರೂಪಿಸಿದ ಪ್ರತಿಭೆ ಇವರು. ಬಳಿಕ ಕಾಂತಾವರ, ಮಧೂರು ಮೇಳಗಳಲ್ಲಿ ವ್ಯವಸಾಯಿ ತಿರುಗಾಟ. ಪ್ರಸ್ತುತ ಕೂಡ್ಲು ಮೇಳದ ಮುಖ್ಯ ಮದ್ಲೆಗಾರರು. ಹಿರಿಯ ಕಲಾವಿದರೆಲ್ಲರ ಜೊತೆ ಹಿಮ್ಮೇಳ ನುಡಿಸಿರುವ ನಾವಡರು ಯಕ್ಷಪೂರ್ಣಿಮಾ ಅಭಿಯಾನದುದ್ದಕ್ಕೂ ಹಿಮ್ಮೇಳದಲ್ಲಿ ಸಹಕರಿಸಿದವರು. ಕಾಸರಗೊಡು ಪರಿಸರದಲ್ಲಿ ಅಪೂರ್ವ ದೊಂದಿಯಾಟದ ಆಕರ್ಷಣೆ.

ಪರಕ್ಕಿಲದಲ್ಲಿ ಅ.24ರಂದು ಬೆಳಿಗ್ಗಿನಿಂದ ನಡೆಯುವ ಉದ್ಘಾಟನೆ, ಸಂಸ್ಮರಣೆ, ಮಂಗಳೂರು ವಿ.ವಿ ಪ್ರಾಯೋಜಿತ ವಿಚಾರ ಸಂಕಿರಣ, ಬಳಿಕದ ವಿಶೇಷ ತಾಳಮದ್ದಳೆ ಹಾಗೂ ತದನಂತರದ ಸಮಾರೋಪ ಸಮಾರೋಪ ಸಮಾರಂಭದ ಬಳಿಕ ದೊಂದಿ ಬೆಳಕಿನಲ್ಲಿ ‘ಕದಂಬ ಕೌಶಿಕೆ’ ಬಯಲಾಟ ನಡೆಯಲಿರುವುದು ವಿಶೇಷ ಆಕರ್ಷಣೆ. ಒಂದು ಕಾಲದ ಯಕ್ಷಗಾನದ ಪರಂಪರೆಯ ಪ್ರತೀಕವಾಗಿ ದೊಂದಿ ಬೆಳಕಿನಾಟ ನಡೆಯುತ್ತಿದ್ದು, ಇತ್ತೀಚಿನ ದಶಕದಲ್ಲಿ ಕಾಸರಗೋಡು ಪರಿಸರದಲ್ಲಿ ಇದು ಅಪೂರ್ವವಾಗಿದೆ. ಹೊಸ ಪೀಳಿಗೆಯ ಪ್ರೇಕ್ಷಕರು, ಕಲಾಭಿಮಾನಿಗಳು ದೊಂದಿ ಬೆಳಕಿನ ಬಯಲಾಟ ನೋಡಿರುವುದೇ ಅಪೂರ್ವ. ಈ ಹಿನ್ನೆಲೆಯ;ಲ್ಲಿ ಸಂಜೆ 7ರಿಂದ ಪರಕ್ಕಿಲದಲ್ಲಿ ದೊಂದಿ ಬೆಳಕಿನ ಬಯಲಾಟ ನಡೆಯಲಿದೆ.

ಭಾಗವತರಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ ಹಾಗೂ ಬಲಿಪ ಪ್ರಸಾದ ಭಟ್, ಹಿಮ್ಮೇಳದಲ್ಲಿ ಅಡೂರು ಲಕ್ಷ್ಮೀನಾರಾಯಣ ರಾವ್, ಗೋಪಾಲಕೃಷ್ಣ ನಾವಡ ಮಧೂರು, ಉದಯ ಕಂಬಾರು, ಮುರಲೀಮಾಧವ ಮಧೂರು, ಚಕ್ರತಾಳದಲ್ಲಿ ರಾಜೇಂದ್ರ ಭಟ್ ಪಂಜಿಗದ್ದೆ ಮತ್ತು ವೇಷಧಾರಿಗಳಾಗಿ ಡಾ.ಶ್ರೀಧರ ಭಂಡಾರಿ, ಸುಬ್ರಾಯ ಹೊಳ್ಳ ಕಾಸರಗೋಡು, ದಿವಾಣ ಶಿವಶಂಕರ ಭಟ್, ವಾಸುದೇವರಂಗಾ ಭಟ್ , ದಿವಾಕರ ರೈ ಸಂಪಾಜೆ, ಮಹೇಶ ಮಣಿಯಾಣಿ ದೊಡ್ಡತೋಟ, ಹರೀಶ ಶೆಟ್ಟಿ ಮಣ್ಣಾಪು, ರಾಕೇಶ್ ರೈ ಅಡ್ಕ, ಈಶ್ವರ ಪ್ರಸಾದ, ಶಶಿಧರ ಕುಲಾಲ್, ಲಕ್ಷ್ಮಣ ಮರಕಡ, ಶಬರೀಶ ಮಾನ್ಯ, ಶೇಖರ ಜಯನಗರ, ಶ್ರೀಮುಖ ಮಯ್ಯ ಸೇರಿದಂತೆ ಪ್ರಮುಖರು ಪಾಲ್ಗೊಳ್ಳುವರು.

ಕೃಪೆ : mangaloretips

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ